ಚೆಲುವಯ್ಯ ಚೆಲುವೊ ತಾನಿ ತಂದಾನ
ಜಾನಪದ
ಚೆಲುವಯ್ಯ ಚೆಲುವೊ ತಾನಿ ತಂದಾನ
ಚಿನ್ಮಯ ರೂಪೇ ಕೋಲನ್ನ ಕೋಲೆ
ಬೆಟ್ಟದ್ಮೇಗಳ ಜಲ್ಲೆಬಿದಿರು
ಬೇಲಿ ಮ್ಯಾಗಳ ಸೋರೆಬುರುಡೆ
ಲೋಲು ಕಿನ್ನುಡಿ ನುಡಿಸೋರ್ಯಾರಯ್ಯ
ಲೋಲು ಕಿನ್ನುಡಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಬರುವಯ್ಯ ||
ನಿಮ್ಮ ಕೇರಿಗೆ ಬಂದ್ರೆ ಬರುವೆ
ಕಂಡರ್ ನಿಮ್ಮ ತಾಯಿ ತಂದೆ
ಬಂದೆಯಾಕೆ ಅನ್ನುತ್ತಾರೆಮ್ಮೆ | ತಾ ಹೆಣ್ಣೆ
ಬಂದರೇನು ಕೊಡುವೆ ಹೇಳೆಣ್ಣೆ ||
ನಮ್ಮ ಕೇರಿಗ್ ಬಂದರೀಗ
ಕರಿಯ ಕಂಬ್ಳಿ ಗದ್ಗೆ ಹೂಡಿ
ತಂದು ಕೊಡುವೆ ಗಂಧವೀಳ್ಯಾವಾ ||
ಗಂಧನಾದ್ರು ಧರಿಸುತ್ತೀನಿ
ವೀಳ್ಯನಾದ್ರು ಮೆಲ್ಲುತೀನಿ
ಬಂದ ಕಾರ್ಯ ಹೇಳೆ ಅಮ್ಮಯ್ಯ ||
ಚೆಲುವಯ್ಯ ಚೆಲುವೊ ತಾನಿತಂದಾನಾ
ಚಿನ್ಮಾಯ ರೂಪೆ ಕೋಲನ್ನ ಕೋಲೆ ||